Source : Internet

Friday, 27 May 2011

ಅ(ವನ)ಸಂಗತ(ತಿ)


ಅವನೆಂದರೆ... ನನ್ನ ಆಳ-ಅಗಲಗಳನ್ನು ಬಲ್ಲವನು..
                      ನನ್ನ ಸ್ವಾಭಿಮಾನವ ಕರಗಿಸಿ ನೀರಾಗಿಸಿದವನು..
                      ಒಳಗಿಗೂ ಹೊರಗಿಗೂ ನಡುವಿನ ಕಂದಕವನ್ನು ತುಂಬಿಸಿದವನು..

ಅವನೆಂದರೆ... ನನ್ನನ್ನು ಕರಗಿಸಿ ತನ್ನ ಎರಕ ಹೊಯ್ದವನು..
                      ಮನದ ಬನದಲ್ಲಿ ಬಣ್ಣದ ಕಾರಂಜಿ ಚಿಮ್ಮಿಸುವವನು..
                      ನನ್ನ ಬಣ್ಣದ ಅಂಗಿಗಳಿಗೆ ಚಿಟ್ಟೆಯನ್ನು ಕೂರಿಸುವವನು..

ಅವನೆಂದರೆ...ನನ್ನೊಡಲ ತೆರೆಗಳಿಗೆ ದಡವಾಗುವವನು..
                     ಚಿಪ್ಪೊಳಗಿನ ಮುತ್ತಾಗುವವನು..
                     ಶಂಖದೊಳಗಿನ ಧ್ವನಿಯಾಗುವವನು..

ಅವನೆಂದರೆ...ಎದುರಿಗೆ ಬಂದು ಮಾತು ಮರೆಸುವವನು..
                     ಮೌನದಲ್ಲಿ ಕವಿತೆಯಾಗುವವನು..
                     ಕವನದ ಪದಗಳಲ್ಲಿ ಬಚ್ಚಿಟ್ಟುಕೊಳ್ಳುವವನು..

ಅವನೆಂದರೆ...ನನ್ನ ರಾತ್ರಿಗಳನ್ನು ಬೆಳಗಿಸುವವನು..
                     ನನ್ನ ಹಗಲುಗಳಲ್ಲಿ ನಕ್ಶತ್ರಗಳನ್ನು ಮಿನುಗಿಸುವವನು..
                     ನನ್ನ ಕನಸು-ನನಸುಗಳ ನಡುವಿನ ತೆರೆ ಸರಿಸುವವನು..

ಅವನೆಂದರೆ...ಒಮ್ಮೊಮ್ಮೆ ಹಗಲ ಸೂರ್ಯನಂತೆ ಪ್ರಖರವಾಗುವನು..
                     ಮತ್ತೆ ಹುಣ್ಣಿಮೆ ಚಂದ್ರನ ತಂಪು ನೀಡುವನು..
                     ವಿರಸ ಮರೆಸಿ ರಸವ ಹರಿಸುವನು...

ಅವನೆಂದರೆ...ನನ್ನೊಳಗಿನ ಹೊರಗನ್ನು ಮಥಿಸುವವನು..
                     ತನ್ನೊಳಗಿನ ಬೆರಗನ್ನು ತೋರಿಸುವವನು..
                     ನನ್ನೊಳಗಿನಲ್ಲಿ ತನ್ನಿರವನ್ನು ಮರೆಯುವವನು..

ಅವನೆಂದರೆ...ಮರೆಯದ ಭೂತ..
                     ಇರುವ ವರ್ತಮಾನ..
                     ಕಾಯಿಸುವ ಕಾಡಿಸುವ ಭವಿಶ್ಯ..

ಅವನೆಂದರೆ...ಅವನೇ???? ಅಲ್ಲ ನಾನೇ????
                     ಇಲ್ಲ ನಾನೆಂದರೆ ಅವನೇ.....????

No comments:

Post a Comment